"ಸುಬ್ಬರಾಯರು ನಮ್ಮೂರಿನ ಹಿರಿಯರು, ಶತಾಯುಷಿಗಳು. ಅವರಿಗೆ ಈಗ ೧೦೩ ವರ್ಷ. .... ನೂರರ ಮೇಲೆ ಮೂರಾದರೂ ಲವಲವಿಕೆಯಿಂದ ಓಡಾಡಿಕೊಂಡಿರುವ ಒಂದೇ ಕಾರಣದಿಂದ ಅವರು ನಮ್ಮೂರಿನ ಆಕರ್ಷಣೆಯ ಕೇಂದ್ರ" ಎಂದು ಆರಂಭವಾಗುತ್ತದೆ ಮೊದಲ ಅಧ್ಯಾಯ, "ಮರಗಳ ಒಡನಾಟ."
ಅದರ ಎರಡನೇ ಪಾರಾದಲ್ಲೇ ಈ ಪ್ರಶ್ನೆ ಎತ್ತುತ್ತಾರೆ, ಲೇಖಕರಾದ ಎಚ್. ಆರ್. ಕೃಷ್ಣಮೂರ್ತಿಯವರು, "ನೂರು ವಸಂತಗಳನ್ನು ಕಂಡ ಸುಬ್ಬರಾಯರೇ ಇಂತಹ ಆಕರ್ಷಣೆಯ ಕೇಂದ್ರವಾದರೆ, ನೂರಾರು ಸಾವಿರಾರು ವರ್ಷಗಳಾದರೂ ಆರೋಗ್ಯಪೂರ್ಣವಾಗಿ ಬದುಕುತ್ತಿರುವ ಜೀವಿಗಳನ್ನು ನಾವು ಹೇಗೆ ಕಾಣಬೇಕು?" "ಎಲ್ಲಿವೆ ಅಂಥ ಜೀವಿಗಳು?" ಎಂಬ ಪ್ರಶ್ನೆಗೆ ಉತ್ತರವಾಗಿ ಸಾವಿರಾರು ವರುಷ ಬದುಕಿರುವ ಮರಗಳನ್ನು ಉದಾಹರಿಸುತ್ತಾರೆ: (1) ಡೆಹ್ರಾಡೂನಿನ ಅರಣ್ಯ ಸಂಶೋಧನಾ ಸಂಸ್ಠೆಯ ಆವರಣದಲ್ಲಿರುವ ದೇವದಾರು ಮರ. ಇದು…