ಕನ್ನಡನಾಡಿನಲ್ಲಿ ಮನೆಮಾತಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನ ಇದು. ಮಡದಿ ತೀರಿಕೊಂಡ ನಂತರ, ಆ ಅಗಲಿಕೆಯ ನೋವಿನಲ್ಲಿ ೬ ಜನವರಿ ೨೦೦೭ರಿಂದ ೨೬ ಎಪ್ರಿಲ್ ೨೦೦೮ರ ಅವಧಿಯಲ್ಲಿ ಅವರು ಬರೆದ ೨೪ ಭಾಗಗಳ “ಉತ್ತರಾಯಣ" ಮತ್ತು ಇತರ ಹಲವು ಚಿಂತನೆಗೆ ಹಚ್ಚುವ ಕವನಗಳು ಇದರಲ್ಲಿವೆ.
ಈ ಹಿನ್ನೆಲೆಯಲ್ಲಿ, ಕವನ ಸಂಕಲನದ ಆರಂಭದಲ್ಲಿ ಕವಿ ಬರೆದುಕೊಂಡಿರುವ ಮಾತುಗಳ ಆಯ್ದ ಭಾಗ ಹೀಗಿದೆ: “ಬದುಕಿನುದ್ದಕ್ಕೂ ಅಭೇದ್ಯ ಎನ್ನುವಂತೆ ಅಂಟಿಕೊಂಡಿದ್ದ ಆಪ್ತಜೀವ ಶಾಶ್ವತವಾಗಿ ಅಗಲಿಬಿಟ್ಟಾಗ ಶೂನ್ಯಕ್ಕೆ ಬೇರೆಯದೇ ಅರ್ಥ ಹೊಳೆದಂತಾಯಿತು. ಲಕ್ಷೋಪಲಕ್ಷ ನಕ್ಷತ್ರಗಳಿಗೆ ಆಸರೆ ನೀಡಿರುವ ಆಕಾಶವನ್ನು ಶೂನ್ಯವೆಂದು ಕರೆಯಲಾದೀತೆ? ಬೆಳಗ್ಗೆ ಖಾಲಿ ನೀಲಿಯಾಗಿದ್ದ ಗಗನ, ರಾತ್ರಿ ಎಣಿಸಲಾಗದಷ್ಟು ನಕ್ಷತ್ರಗಳನ್ನು ಮಿನುಗಿಸುತ್ತಾ ಶೂನ್ಯದ…