*ಹಾ. ಮ. ಸತೀಶರ "ಆಸರೆ" : ಪ್ರಕೃತಿಪ್ರೀತಿ, ಪ್ರೇಮದುಯ್ಯಾಲೆ, ಬದುಕಿನ ಕನ್ನಡಿ*
"ಆಸರೆ", ಹಾ. ಮ. ಸತೀಶ ಅವರ ಮೊದಲ ಕವನ ಸಂಕಲನ. 1997ರಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ ಗೂಡಿನಬಳಿ (ಬಂಟ್ವಾಳ ತಾಲೂಕು) ಪ್ರಕಟಿಸಿದ ಆಸರೆಗೆ ಪ್ರೊ. ಡಾ. ಅಮೃತ ಸೋಮೇಶ್ವರರ ಮುನ್ನುಡಿ ಮತ್ತು ಕವಿ, ಗಮಕಿ ಬೆಳ್ತಂಗಡಿಯ ಟಿ. ಸುಬ್ರಹ್ಮಣ್ಯ ಭಟ್ ಅವರ ಬೆನ್ನುಡಿ ಇದೆ.
"ಆಸರೆ" ಯಲ್ಲಿರುವ ಕವನಗಳು, "ಛಂದೋಬದ್ಧವಾದ ಗೇಯ ರಚನೆಗಳು" ಎನ್ನುವುದನ್ನು ತಮ್ಮ ಮುನ್ನುಡಿಯಲ್ಲಿ ಉಲ್ಲೇಖಿಸಿರುವ ಅಮೃತ ಸೋಮೇಶ್ವರರು, "ತಾರುಣ್ಯ ಸಹಜವಾದ ಕನಸುಗಾರಿಕೆ, ಜೀವನೋತ್ಸಾಹ, ಕುತೂಹಲ, ಅಭೀಷ್ಟೆಗಳು ಸಾಕಷ್ಟು ಪ್ರಮಾಣದಲ್ಲಿ ಕಾಣಿಸಿಕೊಂಡರೂ, ಅತಿಯಾದ ಭಾವೋದ್ರೇಕ, ಆಕ್ರೋಶ, ಬಾಲಿಶ ಕಲ್ಪನಾ ವಿಲಾಸ, ವಿಕ್ಷಿಪ್ತತೆ ಇವುಗಳು ಮೊಗ ತೋರಿಸಿಲ್ಲ" ಎಂದು ಸಮಾಧಾನ…