ಕಳೆದ ವಾರ ‘ಈ ಮರದ ನೆರಳಿನಲಿ’ ಕೃತಿಯ ಮುನ್ನುಡಿಯನ್ನು ಓದಿರುವಿರಿ. ಈ ವಾರ ಕೃತಿಯ ಲೇಖಕರಾದ ಕೆ ಪಿ ಭಟ್ಟರು ‘ನನ್ನ ಮಾತು’ ಬರಹದಲ್ಲಿ ಬರೆದ ಅನಿಸಿಕೆಗಳು…
“ನನ್ನ ಇಳಿ ವಯಸ್ಸಿನಲ್ಲಿ ಈ ಕವನ ಸಂಕಲನವನ್ನು ಹೊರ ತರುತ್ತಿದ್ದೇನೆ. ಸುಮಾರು ಮುಕ್ಕಾಲು ಶತಮಾನ ಕಾಲ ಅವಿರತ ದುಡಿಮೆಯಲ್ಲೇ ಜೀವನ ಸಾಗಿಸಿದ ನಾನು ಸಂಸಾರ ನಿರ್ವಹಣೆಗಾಗಿ ನಿರಂತರ ಕಾರ್ಯನಿರ್ವಹಿಸಬೇಕಾಯಿತು. ಕೇವಲ ಒಂಭತ್ತನೆಯ ವಯಸ್ಸಿನಲ್ಲಿಯೆ, ದುಡಿಯುವ ತಂದೆಯನ್ನು ಕಳೆದುಕೊಂಡ ನಾನು ಜೀವನ ನಿರ್ವಹಣೆಯ ಕಾರಣ ಮಾಧ್ಯಮಿಕ ಶಾಲೆಯ ಮೆಟ್ಟಿಲನ್ನೇರಲೇ ಇಲ್ಲ.
ಹದಿನೈದರ ವಯಸ್ಸಿನಲ್ಲಿಯೇ ಮುದ್ರಣಾಲಯದಲ್ಲಿ ಅಕ್ಷರ ಜೋಡಣೆಯ ಕೆಲಸಗಾರನಾಗಿ ಹದಿನೈದು ವರ್ಷ ಕಾಲ ದುಡಿದು, ಆಮೇಲೆ ಸಹೋದರರ, ಮಿತ್ರರ ಸಹಕಾರದಿಂದ ಒಂದು ಮುದ್ರಣಾಲಯವನ್ನು ಪ್ರಾರಂಭಿಸಿದೆ. ಕೆಲಸಗಾರನಾಗಿರುವಷ್ಟು ಕಾಲ ನನ್ನ ಮಿತ್ರರ ಸಹಕಾರದಿಂದ, ಆಗಿನ ಪ್ರಸಿದ್ಧ ಸಾಹಿತಿಗಳಾದ ಶರಶ್ಚಂದ್ರ ಚಟರ್ಜಿ, ಶಿವರಾಮ ಕಾರಂತ, ಅ.ನ.ಕೃ., ತ.ರಾ.ಸು., ಪುರಾಣಿಕ, ಕುಳಕುಂದ ಶಿವರಾಯ, ಕುವೆಂಪು, ಬೇಂದ್ರೆ, ಮಾಸ್ತಿ, ದೇವುಡು ಇನ್ನೂ ಅನೇಕ ಸುಪ್ರಸಿದ್ಧ ಸಾಹಿತಿಗಳ ಕೃತಿಗಳನ್ನು ಓದುವ ಸೌಭಾಗ್ಯ ನನ್ನದಾಯಿತು.
ಅದೇ ಸಮಯದಲ್ಲಿ ನಾನು ಸುಮಾರು ಹನ್ನೆರಡಕ್ಕೂ ಮೇಲ್ಪಟ್ಟು ಚಿಕ್ಕ ಕತೆಗಳನ್ನು ಬರೆದಿದ್ದು, ಅವು ಉಡುಪಿಯ "ರಾಯಭಾರಿ” ಧಾರವಾಡದ “ಜಯ ಕರ್ನಾಟಕ” ಮೊದಲಾದ ಪತ್ರಿಕೆಗಳಲ್ಲಿ ಪ್ರಕಾಶಿತಗೊಂಡವು. ಶ್ರೀ ಪಾಂಡೇಶ್ವರ ಗಣಪತಿ ರಾಯರು ಹೊನ್ನಾವರದಲ್ಲಿಯ "ನಾಗರಿಕ" ಪತ್ರಿಕೆಯ ಸಂಪಾದಕರಾಗಿದ್ದರು. ನಾನೊಂದು ಕವಿತೆಯನ್ನು ಪ್ರಪ್ರಥಮ ಬಾರಿಗೆ ಪ್ರಕಟನೆಗಾಗಿ ಅವರಿಗೆ ಕಳುಹಿಸಿದೆ. ಕವನ ಮುಟ್ಟಿದೊಡನೆ ಅವರಿಂದ ನನಗೊಂದು ಅಂಚೆ ಕಾರ್ಡ ಬಂದಿತು : "ನಿಮ್ಮ ಕವನ ಚೆನ್ನಾಗಿದೆ, ಮುಂದಿನ ಸಂಚಿಕೆಯಲ್…
ಮುಂದೆ ಓದಿ...